ಚೇಂಬರ್ಲಿನ್, ಚಾಲ್ರ್ಸ್ ಜೋಸೆಫ್ - 
1863-1943. ಅಮೆರಿಕದ ಪ್ರಸಿದ್ಧ ಸಸ್ಯಶಾಸ್ತ್ರಜ್ಞ. ನಗ್ನಬೀಜ ಹಾಗೂ ಆವೃತ ಬೀಜ ಸಸ್ಯಗಳ ರೂಪರಚನಾಶಾಸ್ತ್ರಗಳ ಬಗ್ಗೆ ಗಮನಾರ್ಹ ಕೊಡುಗೆ ನೀಡಿದ ಕೆಲವೇ ಶಾಸ್ತ್ರಜ್ಞರಲ್ಲಿ ಒಬ್ಬ. ಅಮೆರಿಕದ ಒಹಾಯೊ ಪ್ರಾಂತ್ಯದ ಸಲಿವಾನ್ ಎಂಬಲ್ಲಿ 1863ರ ಫೆಬ್ರುವರಿ 23ರಂದು ಈತ ಜನಿಸಿದ. ಸುಪ್ರಸಿದ್ಧ ಭೂವಿಜ್ಞಾನಿಯಗಿದ್ದ ಎ. ಎ. ರೈಟ್‍ನ ಮಾರ್ಗದರ್ಶನದಲ್ಲಿ ಓಬರ್ಲಿನ್ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಅಭ್ಯಾಸಮಾಡಿದ. ಆ ವೇಳೆಯಲ್ಲಿ, ಸಸ್ಯ ಅಂಗಾಂಶಗಳ ಬಗ್ಗೆ, ಕೋಶಗಳನ್ನು ತಾಂತ್ರಿಕ ಹಾಗೂ ವೈಜ್ಞಾನಿಕ ರೀತಿನೀತಿಗಳಿಂದ ಅಭ್ಯಾಸಿಸುವ ಬಗ್ಗೆ ಈತನಿಗೆ ಕುತೂಹಲ ಮೂಡಿ, ಪೇಲಿಯೋಜೋಯಿಕ್ ಕಾಲದ ಪ್ರಾಚೀನ ಸಸ್ಯವರ್ಗಗಳಿಂದ ಇತ್ತೀಚಿನ ಕೆಲವು ವರ್ಗಗಳು ಹೇಗೆ ಉಗಮಗೊಂಡಿರಬಹುದು ಎಂಬುದನ್ನು ಕುರಿತು ಯೋಚಿಸತೊಡಗಿದ. ಮುಂದೆ 1888 ರಲ್ಲಿ ಪದವೀಧರನಾಗಿ ಮಾರ್ಥ ಲೈಫ್ ಎಂಬವಳನ್ನು ವಿವಾಹವಾದ. ಅನಂತರ ಒಹಾಯೊ ಹಾಗೂ ಮಿನಿಸೋಟಗಳ ಸಾರ್ವಜನಿಕ ಶಾಲೆಗಳಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡಿದ. ಅನೇಕ ವರ್ಷಗಳವರೆಗೆ ಮಿನಿಸೋಟದ ಕ್ರೂಕ್ಸ್‍ಟನ್ನಿನ ಪ್ರೌಢಶಾಲೆಯ ಮುಖ್ಯಾಧಿಕಾರಿಯೂ ಆಗಿದ್ದ. ಬೇಸಗೆಯ ವಿರಾಮ ಕಾಲದಲ್ಲಿ ಸಸ್ಯಶಾಸ್ತ್ರದ ಅಧ್ಯಯನವನ್ನು ಮುಂದುವರಿಸಿ 1894ರಲ್ಲಿ ಓಬರ್ಲಿನ್ನಿನಿಂದ ಮಾಸ್ಟರ್ ಪದವಿಯನ್ನೂ 1897ರಲ್ಲಿ ಚಿಕಾಗೊ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪದವಿಯನ್ನೂ ಪಡೆದ. ಆಮೇಲೆ ಚೇಂಬರ್ಲಿನ್‍ನ ಆಸಕ್ತಿ ನಗ್ನಬೀಜ ಮತ್ತು ಆವೃತ ಬೀಜಸಸ್ಯಗಳ ರೂಪರಚನೆ ಹಾಗೂ ಭ್ರೂಣ ಶಾಸ್ತ್ರಗಳ ಕಡೆಗೆ ಹರಿಯಿತು. ಚಿಕಾಗೊ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಫಾಕಲ್ಟಿಯಲ್ಲಿ 45 ವರ್ಷಗಳ ಕಾಲ ಸದಸ್ಯನಾಗಿದ್ದ. 1901 ರಿಂದ 1902ರ ವರೆಗೆ ಜರ್ಮನಿಯ ಬಾನ್‍ನಲ್ಲಿ ಅಂದಿನ ಸುಪ್ರಸಿದ್ಧ ಸಸ್ಯಶಾಸ್ತ್ರಜ್ಞನಾಗಿದ್ದ ಎಡ್ವರ್ಡ್ ಸ್ಟ್ರಾಸ್‍ಬರ್ಗರ್‍ನ ಪ್ರಯೋಗ ಶಾಲೆಯಲ್ಲಿ ಸಂಶೋಧನೆಗಳಲ್ಲಿ ತೊಡಗಿದ್ದ. 1915ರಲ್ಲಿ ಈತನನ್ನು ಚಿಕಾಗೊ ವಿಶ್ವವಿದ್ಯಾಲಯ ರೂಪರಚನಾಶಾಸ್ತ್ರ ಹಾಗೂ ಕೋಶಶಾಸ್ತ್ರಗಳ ಪ್ರಾಧ್ಯಾಪಕನನ್ನಾಗಿ ನೇಮಿಸಿತು. 1929ರ ತರುವಾಯ ಇಮೆರಿಟಸ್ ಪ್ರಾಧ್ಯಾಪಕನಾಗಿ  ಮುಂದುವರಿದ. 1943ರ ಜನವರಿ 5 ರಂದು ಇಲಿನಾಯ್‍ನಲ್ಲಿ ನಿಧನನಾದ.
ಸಸ್ಯಶಾಸ್ತ್ರದ ಬೆಳೆವಣಿಗೆಗೆ ಚೇಂಬರ್ಲಿನ್ ಸಲ್ಲಿಸಿರುವ ಸೇವೆ ಅಷ್ಟಿಷ್ಟಲ್ಲ. 1902ರಲ್ಲಿ ಬೊಟಾನಿಷೆಸ್ ಟ್ಸೆಂಟ್ರಾಲ್‍ಬ್ಲಾಟ್ ಎಂಬ ಜರ್ಮನ್ ನಿಯತಕಾಲಿಕಕ್ಕೆ ಕೋಶಶಾಸ್ತ್ರ ಸಂಪಾದಕನಾಗಿದ್ದ. ಅನೇಕ ಅಂತರರಾಷ್ಟ್ರಿಯ ಸಸ್ಯಶಾಸ್ತ್ರ ಸಂಘಗಳ ಉಪಾಧ್ಯಕ್ಷ ಹಾಗೂ ಅಧ್ಯಕ್ಷನಾಗಿದ್ದುಕೊಂಡು ಸಸ್ಯಶಾಸ್ತ್ರದ ಪುರೋಭಿವೃದ್ಧಿಗೆ ಮನಸಾರೆ ಸಹಾಯಮಾಡಿದ. 1931-32ರಲ್ಲಿ ಅಮೆರಿಕದ ಸಸ್ಯಶಾಸ್ತ್ರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ.

ತಾಳಕಲ್ಪ ಸಸ್ಯಗಳ (ಸೈಕ್ಯಾಡ್ಸ್) ಉಗಮ ಮತ್ತು ವಿಕಾಸಗಳ ಬಗ್ಗೆ ಆಳವಾದ  ಅಧ್ಯಯನ ನಡೆಸಿದವರಲ್ಲಿ ಚೇಂಬರ್ಲಿನ್ ಮೊದಲಿಗ. ಅವುಗಳ ಪ್ರಾಚೀನ ಇತಿಹಾಸವನ್ನೆಲ್ಲ ಅಭ್ಯಸಿಸಿ ಹಿಂದಿನ ತಾಳಕಲ್ಪಗಳ ಮತ್ತು ಆಧುನಿಕ ತಾಳಕಲ್ಪಗಳ ಅಂತರ ಸಂಬಂಧಗಳ ಬಗ್ಗೆ ವಿವರಣೆಗಳನ್ನು ನೀಡಿದ. ತಾಳಕಲ್ಪಗಳನ್ನು ಅವುಗಳ ನೈಸರ್ಗಿಕ ಆವರಣಗಳಲ್ಲೇ ಅಭ್ಯಸಿಸಲು ಅವು ಬೆಳೆಯುವ ಅನೇಕ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡ ಈತ 1904, 1906, 1908 ಮತ್ತು 1910ರಲ್ಲಿ ಮೆಕ್ಸಿಕೋವನ್ನೂ 1911-12ರಲ್ಲಿ ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಗಳನ್ನೂ ಸಂದರ್ಶಿಸಿದ. ಅನಂತರ ಕ್ಯೂಬಕ್ಕೆ ಎರಡು ಬಾರಿಹೋಗಿ ಬಂದ. ಈತನ ಪುಸ್ತಕ ಜೀವಂತ ತಾಳಕಲ್ಪ (ದಿ ಲಿವಿಂಗ್ ಸೈಕ್ಯಾಡ್)  ಈ ಎಲ್ಲ ಸಂಶೋಧನೆಗಳ ಹಾಗೂ ಸಮಕಾಲೀನ ಸಂಶೋಧನೆಗಳ ಬಗ್ಗೆ ವಿಶದವಾದ ವಿವರಗಳಿರುವ ಒಂದು ಉದ್ಗ್ರಂಥವಾಗಿದೆ. ಪ್ರಪಂಚದ ತಾಳಕಲ್ಪಗಳ ಬಗ್ಗೆ ಇಷ್ಟೊಂದು ವಿವರಣಾತ್ಮಕ ಹಾಗೂ ಅಧಿಕಾರಯುತ ಗ್ರಂಥ ಇನ್ನೊಂದಿಲ್ಲ. ಇದೇ ಕಾಲದಲ್ಲಿ ಪ್ರಪಂಚದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ತಾಳಕಲ್ಪಗಳನ್ನು ಚಿಕಾಗೊ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ತೋಟದಲ್ಲಿ ಬೆಳೆಸಲು ಪ್ರಯತ್ನಿಸಿದ. ಇಂದು ಈ ತೋಟ ಪ್ರಪಂಚದಲ್ಲೆ ಅತಿ ಹೆಚ್ಚು ತಾಳಕಲ್ಪಗಳನ್ನು ಪಡೆದಿರುವ ಒಂದು ಅಪೂರ್ವ ಉದ್ಯಾನವನವಾಗಿದೆ. ತಾಳಕಲ್ಪಗಳ ಎಲ್ಲ 9 ಜಾತಿಗಳು ಹಾಗೂ ಅರ್ಧ ಭಾಗಕ್ಕಿಂತಲೂ ಹೆಚ್ಚಿನ ಪ್ರಭೇದಗಳು ಇಲ್ಲಿವೆ. ಚೇಂಬರ್ಲಿನ್ ಬರೆದ ಪುಸ್ತಕಗಳಲ್ಲಿ ಮುಖ್ಯವಾದವು ಇವು ; ಮಾರ್ಫಾಲಜಿ ಆಫ್ ಸ್ಟರ್ಮಟೋಫೈಟ್ಸ್ (1901), ಮಾರ್ಫಾಲಜಿ ಆಫ್ ಏಂಜಿಯೋಸ್ಟಮ್ರ್ಸ್ (1903), ಮಾರ್ಫಾಲಜಿ ಆಫ್ ಜಿಮ್ನೋಸ್ಟಮ್ರ್ಸ್ (1910, 1917), ಮೆಥಡ್ಸ್ ಇನ್ ಪ್ಲಾಂಟ್ ಹಿಸ್ಟಾಲಜಿ, (1901, 1903,  1915, 1924 ಮತ್ತು 1932), ದಿ ಲಿವಿಂಗ್ ಸೈಕ್ಯಾಡ್ಸ್ (1919), ಎಲಿಮೆಂಟ್ಸ್ ಆಫ್ ಪ್ಲಾಂಟ್ ಸೈನ್ಸ್ (1930) ಮತ್ತು ಜಿಮ್ನೋಸ್ಟಮ್ರ್ಸ್: ಸ್ಟ್ರಕ್ಚರ್ ಎಂಡ್ ಎವಲ್ಯೂಷನ್ (1935).
(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ